ಬೆಂಗಳೂರಿನ ಕೆಂಗೇರಿಯಲ್ಲಿ ಈ ಘಟನೆ ನಡೆದಿದೆ ಈ ಘಟನೆಯು ಮಧ್ಯದ ಅತಿಯಾದ ಸೇವನೆಯು ಕುಟುಂಬವನ್ನು ಹೇಗೆ ಸಂಪೂರ್ಣವಾಗಿ ಧ್ವಂಸ ಮಾಡಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
ಮಗಳು ಭಾಗ್ಯಲಕ್ಷ್ಮಿ ಹಾಗೂ ಮೊಮ್ಮಗ ಕುಶಾಲ್ ಜೊತೆ 75 ವರ್ಷದ ವೃದ್ಧೆ ಜಯಮ್ಮ ಒಂದೇ ಮನೆಯಲ್ಲಿದ್ದುಕೊಂಡಿದ್ದರು ಕುಡಿತದ ಚಟ ಹೆಚ್ಚಾಗಿ ಮನೆಯ ನೆಮ್ಮದಿ ಹಾಳಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.ಆಸ್ತಿ ಮಾರಾಟದಿಂದ ಬಂದ ಹಣವನ್ನು ಸಹ ಮದ್ಯಪಾನಕ್ಕೆ ಬಳಸಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಭಾನುವಾರ ರಾತ್ರಿ ಆಸ್ತಿ ಹಂಚಿಕೆ ಮತ್ತು ಹಣದ ವಿಚಾರವಾಗಿ ತಾಯಿ ಮತ್ತು ಮಗಳ ನಡುವೆ ತೀವ್ರ ವಾದಗಳು ನಡೆದಿದ್ದು ಮೊದಲು ಮಾತಿನ ಜಗಳವಾಗಿದ್ದ ಈ ಘಟನೆ, ನಂತರ ಕುಡಿತದ ಮತ್ತಿನಲ್ಲಿ ನಿಯಂತ್ರಣ ತಪ್ಪಿ ಭೀಕರ ಹಂತಕ್ಕೆ ತಲುಪಿದೆ ಎಂದು ತಿಳಿದುಬಂದಿದೆ. ಇದೆ ವೇಳೆ ಮಗಳು ಭಾಗ್ಯಲಕ್ಷ್ಮಿ ಮೊಮ್ಮಗ ಕುಶಾಲ್ ಸೇರಿ ಜಯಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಜಗಳ ಅತಿರೇಕಕ್ಕೆ ಹೋಗಿ ಮನೆಯಲ್ಲಿದ್ದ ಮುದ್ದೆ ಮಾಡುವ ಕೋಲಿನಿಂದ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ವೃದ್ಧೆ ಜಯಮ್ಮ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಎನ್ನಲಾಗಿದೆ ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಘಟನೆಯ ಬಳಿಕ ಆರೋಪಿಗಳು ಮೃತದೇಹದ ಸಮೀಪದಲ್ಲೇ ಇದ್ದು ಮದ್ಯಪಾನ ಮುಂದುವರಿಸಿದ್ದಾರೆ ಎಂದು ಗಂಭೀರ ಆರೋಪಗಳು ಕೇಳಿಬಂದಿವೆ.ನಂತರ ಕುಶಾಲ್ ತನ್ನ ಸ್ನೇಹಿತನಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದು ಸ್ನೇಹಿತ ಸ್ಥಳಕ್ಕೆ ಬಂದು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾನೆ.ಸುದ್ದಿ ತಿಳಿದ ತಕ್ಷಣ ಕೆಂಗೇರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಸಾಕ್ಷ್ಯ ಸಂಗ್ರಹ ಮಾಡಿದ್ದಾರೆ. ನಂತರ ಭಾಗ್ಯಲಕ್ಷ್ಮಿ ಮತ್ತು ಕುಶಾಲ್ ಅವರನ್ನು ಬಂಧಿಸಿ ಮುಂದಿನ ತನಿಖೆ ಆರಂಭಿಸಿದ್ದಾರೆ.
ಕುಟುಂಬದೊಳಗಿನ ಮದ್ಯದ ವ್ಯಸನವೇ ಈ ಭೀಕರ ಘಟನೆಯ ಮೂಲ ಕಾರಣವಾಗಿರಬಹುದು ಎಂದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇಂತಹ ಘಟನೆಗಳು ಪದೇ ಪದೇ ಸಮಾಜದಲ್ಲಿ ಮರುಕಳಿಸುತ್ತಿದೆ.ಮದ್ಯದ ಅತಿಯಾದ ಬಳಕೆ ಕೇವಲ ವ್ಯಕ್ತಿಯನ್ನಷ್ಟೇ ಅಲ್ಲ, ಸಂಪೂರ್ಣ ಕುಟುಂಬದ ಭವಿಷ್ಯವನ್ನೇ ನಾಶಮಾಡಬಹುದು.